ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಬರಹಗಳನ್ನು ಪ್ರಕಟಿಸಿ ಕೋಮು ಭಾವನೆ ಕೆರಳಿಸುವ ಹಾಗೂ ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಯಾರೇ ಮಾಡಿದರೂ, ಅವರು ಯಾವುದೇ ಧರ್ಮದ ಸಂಘಟನೆಗೆ ಸೇರಿದವರಾಗಿದ್ದರೂ ಅವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ರಾಜ್ಯ ಪೊಲೀಸ್ ಮಹಾ ನಿದೇರ್ಶಕರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಇತ್ತೀಚಿನ ದಿನಗಳಲ್ಲಿ ಮೂಲಭೂತವಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಪ್ರಚೋದನಾಕಾರಿ ಬರಹಗಳ ಮೂಲಕ ಅವರು ಕೋಮು ಭಾವನೆ ಕೆರಳಿಸುವ ಹಾಗೂ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಅಂತಹವರ ಬಗ್ಗೆ ವಿಶೇಷವಾಗಿ ನಿಗಾ ಇರಿಸುವುದರ ಜೊತೆಗೆ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಮಂಗಳೂರಿನಲ್ಲಿ ಇತ್ತೀಚೆಗೆ ದೀಪಕರಾವ್ ಹಾಗೂ ಬಶೀರ್ ಎಂಬುವರ ಹತ್ಯೆ ಆಗಿದೆ. ಪೊಲೀಸರು ಮುಂಜಾಗ್ರತೆ ವಹಿಸಿದ್ದರೆ ಎರಡೂ ಹತ್ಯೆ ತಪ್ಪಿಸಬಹುದಿತ್ತು. 2017ರಲ್ಲಿ ಅಪರಾಧಗಳ ಸಂಖ್ಯೆ ಕೊಂಚ ಇಳಿಮುಖವಾಗಿದೆ. ಆದರೆ, ಗಣನೀಯವಾಗಿ ಇಳಿಕೆಯಾಗಬೇಕು. ಮಹಿಳೆಯರು, ಮಕ್ಕಳು ಅದರಲ್ಲಿಯೂ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಹೆಚ್ಚಿನ ಗಮನ ಹರಿಸ ಬೇಕಾಗಿರುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಪೋಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನು ಓದಿ: ಪೋಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು
ಮಾದಕ ವಸ್ತುಗಳ ಮಾರಾಟ ಜಾಲದ ಹಿಂದಿರುವವರ ವಿರುದ್ಧ ಕಠಿಣ ಕ್ರಮ...
ಮಾದಕ ವಸ್ತುಗಳ ಮಾರಾಟ ಜಾಲದಿಂದಾಗಿ ಯುವ ಜನಾಂಗ ದಿಕ್ಕು ತಪ್ಪುತ್ತಿರುವುದು ಕಳವಳಕಾರಿ ಸಂಗತಿ. ಹೀಗಾಗಿ ಮಾದಕ ವಸ್ತುಗಳ ಮಾರಾಟ ಜಾಲವನ್ನು ಮಟ್ಟ ಹಾಕುವುದರ ಜೊತೆಗೆ ಆ ಜಾಲದ ಹಿಂದೆ ಇರುವ ವ್ಯಕ್ತಿಗಳು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಕಾನೂನಿನ ಚೌಕಟ್ಟಿಗೆ ತಂದು ಕಠಿಣ ಕ್ರಮ ಕೈಗೊಳ್ಳುವಂತೆಯೂ ವಾರ್ಷಿಕ ಸಮಾವೇಶದಲ್ಲಿ ಸೂಚಿಸಲಾಗಿದೆ ಎಂದು ಸಿಎಂ ವಿವರಿಸಿದರು.