ಬೆಂಗಳೂರು: ಪೋಲೀಸರ ವೇಷಧರಿಸಿ ನೈಸ್ ರಸ್ತೆಯಲ್ಲಿ ಸಾರ್ವಜನಿಕರ ಬಳಿ ದರೋಡೆ ಮಾಡುತ್ತಿದ್ದ ಮೂವರನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.
ದರೋಡೆಮಾಡುತ್ತಿದ್ದ ಬಂಧಿತರನ್ನು ರಘು, ದೊಡ್ಡಯ್ಯ, ಹರೀಶ್ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರ ಬಳಿ ಪೊಲೀಸರು ಅರ್ಧ ಕೆಜಿ ಚಿನ್ನಾಭರಣ, ನಾಲ್ಕು ಲಕ್ಷ ನಗದು, ಒಂದು ಬೊಲೆರೋ ಕಾರ್, ಇನೋವಾ ಕಾರ್ ಮತ್ತು ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ತಮ್ಮ ಕಾರುಗಳಿಗೆ ನಕಲಿ ಸರ್ಕಾರಿ ನೋಂದಣಿ ಸಂಖ್ಯೆಗಳನ್ನು ಅಳವಡಿಸಿಕೊಂಡು ಹಲವು ಕಡೆ ದಾಂದಲೆ ನಡೆಸುತ್ತಿದ್ದರು. ಬಂಧಿತ ರಘು ಎಂಬಾತ ಈ ಹಿಂದೆ ಹೋಂ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದನಲ್ಲದೆ, ರಾಮನಗರದ ಆರ್ ಟಿ ಓ ಕಚೇರಿಯಲ್ಲಿ ಕಾರು ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ಹೇಳಲಾಗಿದೆ.
ಈ ಪ್ರಕರಣದಲ್ಲಿ ಮೊದಲನೇ ಆರೋಪಿ ಆಗಿರುವ ರಘು ಸಬ್ ಇನ್ಸ್‌ಪೆಕ್ಟರ್ ವೇಷ ಧರಿಸಿ ದರೋಡೆ ಮಾಡುತ್ತಿದ್ದನು, ಎರಡನೇ ಆರೋಪಿ ದೊಡ್ಡಯ್ಯ ರಘು ಮಾವ ಹಾಗೂ ಮೂರನೇ ಆರೋಪಿ ಹರೀಶ್ ರಾಯಲ್ ಶಾಲೆಯಲ್ಲಿ ಶಿಕ್ಷಕ. ಎ1 ಆರೋಪಿ ರಘುವಿನ ಮೇಲೆ ಈ ಹಿಂದೆ 30 ಕೇಸ್ ಗಳು ದಾಖಲಾಗಿವೆ. ಈತ ದರೋಡೆ ಮಾಡುವ ಸಲುವಾಗಿಯೇ ಬೊಲೇರೋ ಕಾರ್ ಅನ್ನು ಖರೀದಿಸಿ ಪೋಲೀಸ್ ಜೀಪ್ ರೀತಿಯಲ್ಲಿ ಸಿದ್ದ ಪಡಿಸಿಕೊಂಡಿದ್ದ. ನೈಸ್ ರಸ್ತೆಯಲ್ಲಿ ಬರುವ ಪ್ರೇಮಿಗಳು, ಟೆಕ್ಕಿಗಳನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.