ನವದೆಹಲಿ: ಮಹಾದಾಯಿ ನದಿ ನೀರು ಹಂಚಿಕೆಯ ವಿಚಾರವಾಗಿ ಸತತ ಮೂರನೇ ದಿನ ತನ್ನ ಅಂತಿಮವಾದವನ್ನು ಮುಂದುವರೆಸಿರುವ ಗೋವಾ, ಇಂದು ನ್ಯಾಯಾಧಿಕರಣದದಲ್ಲಿ ಭಾರಿ ಜಲಾಶಯಗಳನ್ನು ನಿರ್ಮಿಸಿ, ನೀರು ಬೇಕು ಅಂದ್ರೆ ಹೇಗೆ? ಎಂದು ವಿಚಾರಣೆ ವೇಳೆಯಲ್ಲಿ ಕರ್ನಾಟಕವನ್ನು ಪ್ರಶ್ನಿಸಿದೆ.
ಇಂದು ತನ್ನ ಮೂರನೇ ದಿನದ ಅಂತಿಮ ವಿಚಾರಣೆಯಲ್ಲಿ ಗೋವಾ ಪರ ವಕೀಲ ಆತ್ಮಾರಾಮ ನಾಡಕರ್ಣಿಯವರು ವಾದವನ್ನು ಮಂಡಿಸುತ್ತಾ ಕರ್ನಾಟಕವು ಈಗಾಗಲೇ ತನ್ನ ಅಂದಾಜಿಗೂ ಮೀರಿದ ಯೋಜನೆಗಳಿಗೆ ಕೈ ಹಾಕಿದೆ. ಬೃಹತ್ ಜಲಾಶಯಗಳನ್ನು ನಿರ್ಮಿಸಿ ಕೃತಕ ನೀರಿನ ಅಭಾವ ಸೃಷ್ಟಿಸಿದೆ, ಈಗ ನಮಗೆ ನೀರು ಕೇಳಿದರೆ ಹೇಗೆ ಕೊಡುವುದು? ಎಂದು ಅವರು ಪ್ರಶ್ನಿಸಿದ್ದಾರೆ.
ಗೋವಾ ಪ್ರಮುಖವಾಗಿ ನವಂಬರ್ ನಿಂದ ಜೂನ್ ವರೆಗೂ ತೀವ್ರ ನೀರಿನ ಅಭಾವವನ್ನು ಎದುರಿಸುತ್ತದೆ. ಕರ್ನಾಟಕ ಹೇಳುವಂತೆ ಮಹಾದಾಯಿ ನೀರು ಸಮುದ್ರಕ್ಕೆ ವ್ಯರ್ಥವಾಗಿ ಹರಿಯುವುದಿಲ್ಲ, ಕೇವಲ ಅದು ಮೂರು ತಿಂಗಳು ಮಾತ್ರ ಸಮುದ್ರಕ್ಕೆ ಹರಿಯುತ್ತದೆ. ಮುಂಗಾರು ಮಳೆ ಜೂನ್ ನಿಂದ ಅಕ್ಟೋಬರ್ ವರೆಗೆ ಮಾತ್ರ ಇರುವುದರಿಂದ ಉಳಿದ ದಿನಗಳಲ್ಲಿ ಗೋವಾದಲ್ಲಿ ನೀರಿನ ಸಮಸ್ಯೆ ಇದೆ ಎಂದು ಅವರು ತಿಳಿಸಿದರು.