ಮೈಸೂರು ದಸರಾ, ಎಷ್ಟೊಂದು ಸುಂದರ ಚೆಲ್ಲಿರಿ ನಗೆಯಾ ಪನ್ನೀರಾ...... ಯಾರಿಗೆ ತಾನೇ ತಿಳಿದಿಲ್ಲ ಈ ಹಾಡು...! ಬರೀ ಹಾಡಷ್ಟೇ ಅಲ್ಲ ನಮ್ಮ ನಾಡಿನ ಹೆಮ್ಮೆಯ ಮೈಸೂರು ದಸರಾವು ಅಷ್ಟೇ ಸುಂದರ. ಕನ್ನಡ ನಾಡಿನ ಕಲೆ-ಸಂಸ್ಕೃತಿ ಬಿಂಬಿಸುವ, ದೇಶ-ವಿದೇಶದ ಜನರನ್ನು ಆಕರ್ಷಿಸುವ ನವರಾತ್ರಿ, ವಿಜಯ ದಶಮಿ, ದಸರಾ ಹಬ್ಬ, ಜಂಬೂ ಸವಾರಿ ಎಂದೆಲ್ಲ ಕರೆಯಲ್ಪಡುವ "ನಾಡ ಹಬ್ಬ" ದಸರಾದಲ್ಲಿ ನವ ದಿನವೂ ಹೊಸ-ಹೊಸ ಸಂಭ್ರಮ. ಸಾಮಾನ್ಯವಾಗಿ ಸೆಪ್ಟೆಂಬರ್-ಅಕ್ಟೋಬರ್ ಮಾಸದಲ್ಲಿ ಬರುವ ಈ ಹಬ್ಬವು ನಾಡಿನ ಒಂದು ವಿಶೇಷ.
ದಸರಾ ಆಚರಣೆ ನಾಡ ಹಬ್ಬವಾದ ಹಿನ್ನೆಲೆ:
ಸುಪ್ರಸಿದ್ದ ವಿಜಯನಗರ ಸಾಮ್ರಾಜ್ಯದ ವೈಭವವನ್ನೂ ಎಷ್ಟು ಬಣ್ಣಿಸಿದರೂ ಅದು ಕಡಿಮೆಯೇ ಎಂದೆನಿಸುತ್ತದೆ. ಅಂತಹ ವೈಭವಗಳಲ್ಲಿ ಒಂದು ಮಹಾನವಮಿ ದಿಬ್ಬ. ಶ್ರೀ ಕೃಷ್ಣದೇವರಾಯರು ಮಹಾನವಮಿ ದಿಬ್ಬದಲ್ಲಿ ಕುಳಿತು ಗಜ ಪಡೆ, ಅಶ್ವ ಪಡೆ, ಸೈನ್ಯದ ಕವಾಯತುಗಳು, ಪಿರಂಗಿಗಳು ಮತ್ತು ಆಯುಧಗಳ ಶಕ್ತಿ ಪ್ರದರ್ಶನಗಳನ್ನು ವೀಕ್ಷಿಸುತ್ತಿದ್ದರು. ನಂತರದ ದಿನಗಳಲ್ಲಿ ಮೈಸೂರು ಅರಸರು ಇದೇ ಪದ್ದತಿಯನ್ನು ಮುಂದುವರೆಸಿದರು. ಪ್ರತಿ ವರ್ಷ ಬಹಳ ವಿಜೃಂಭಣೆಯಿಂದ ಆಚರಿಸಲ್ಪಡುತ್ತಿದ್ದ ಈ ಹಬ್ಬವನ್ನು ಮೈಸೂರು ಅರಸರು "ನಾಡ ಹಬ್ಬ" ಎಂದು ಘೋಷಿಸಿದರು.
ದೇಶದಾದ್ಯಂತ ದಸರಾ ಹಬ್ಬವನ್ನು ಆಚರಿಸಿದರೂ ಸಹ ಕರ್ನಾಟಕದಲ್ಲಿ ಕಾಣಬರುವ ದಸರಾ ಸಂಭ್ರಮವನ್ನೂ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಇಂದಿಗೂ ಸಹ ರಾಜ ಮನೆತನದವರ ಸಹಯೋಗದೊಂದಿಗೆ ಆಚರಿಸಲ್ಪಡುವ ದಸರಾ ಹಬ್ಬವೂ ಕರ್ನಾಟಕದ "ನಾಡ ಹಬ್ಬ" ಎಂದೇ ಕರೆಯಲ್ಪಡುತ್ತದೆ. ವಿಜೃಂಭಣೆಯಿಂದ ಆಚರಿಸಲ್ಪಡುವ ನಾಡ ಹಬ್ಬ ದಸರಾವನ್ನು ವೀಕ್ಷಿಸಲು ದೇಶದ ಮೂಲೆ ಮೂಲೆಗಳಿಂದ ಜನ ಮೈಸೂರಿಗೆ ಬರುತ್ತಾರೆ.
ಮೈಸೂರಿನ ರಾಜ ವಂಶಸ್ಥರು ಹಿಂದಿನ ಕಾಲದಿಂದಲೂ ನವರಾತ್ರಿ ಆಚರಣೆಯ ಒಂಬತ್ತು ದಿವಸಗಳಲ್ಲೂ ಅರಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಒಂಬತ್ತನೆಯ ದಿನದಂದು ಚಾಮುಂಡೇಶ್ವರಿ ಪೂಜೆ ಸಲ್ಲಿಸಿ ರಾಜರು ಚಿನ್ನದ ಅಂಬಾರಿಯಲ್ಲಿ ಕುಳಿತು 'ಬನ್ನಿಮಂಟಪಕ್ಕೆ' ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಆದರೆ ಈಗ ಚಿನ್ನದ ಅಂಬಾರಿಯಲ್ಲಿ ರಾಜರ ಬದಲು ನಾಡದೇವತೆ ಚಾಮುಂಡೇಶ್ವರಿಯನ್ನು ಕೂರಿಸಿ 'ಬನ್ನಿಮಂಟಪಕ್ಕೆ' ಕರೆತರಲಾಗುತ್ತದೆ. ಇದೇ ಎಲ್ಲರ ನೆಚ್ಚಿನ 'ಜಂಬೂ ಸವಾರಿ'.