ಪಾಟ್ನಾ: ಬಿಹಾರದ ಸರನ್ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಮೂವರು ಶಿಕ್ಷಕರು, 15 ವಿದ್ಯಾರ್ಥಿಗಳು ಸೇರಿ 10ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಏಳು ತಿಂಗಳ ಕಾಲ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಏಳು ತಿಂಗಳ ಹಿಂದೆ ಒಬ್ಬ ವಿದ್ಯಾರ್ಥಿ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ್ದ ಎಂದು ಆರೋಪಿಸಲಾಗಿದೆ. ಆರೋಪಿತ ವಿದ್ಯಾರ್ಥಿ ಈ ವಿಷಯವನ್ನು ಇತರ ವಿದ್ಯಾರ್ಥಿಗಳಿಗೆ ಹೇಳಿದ್ದಾನೆ. ನಂತರ 15 ವಿದ್ಯಾರ್ಥಿಗಳು ಆ ವಿದ್ಯಾರ್ಥಿನಿಯ ಮೇಲೆ ಕಳೆದ ಆರು ತಿಂಗಳಿನಿಂದ ಅತ್ಯಾಚಾರ ಮಾಡುತ್ತಿದ್ದರೆಂದು ಆರೋಪಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಕ್ಮಾ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿ ಮತ್ತು ಆಕೆಯ ತಂದೆಯ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದ್ದು, ಶಾಲೆಯ ಪ್ರಿನ್ಸಿಪಾಲ್ ಉದಯ್ ಕುಮಾರ್ ಸಿಂಗ್, ಶಿಕ್ಷಕ ಬಾಲಾಜಿ ಹಾಗೂ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಉಳಿದ 14 ಮಂಡಿ ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಎಕ್ಮಾ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ಅನುಜ್ ಕುಮಾರ್ ಸಿಂಗ್ ಹೇಳಿದ್ದಾರೆ.
ಘಟನೆಯ ಬಗ್ಗೆ ವಿವರಣೆ ನೀಡಿರುವ ಪೊಲೀಸರು 2017 ಡಿಸೆಂಬರ್ನಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿದೆ. ಅದರ ನಂತರ ಅತ್ಯಾಚಾರ ಎಸಗಿದ್ದ ಹುಡುಗ ಆಕೆಯನ್ನು ಬ್ಲಾಕ್ ಮೇಲ್ ಮಾಡುವ ಮೂಲಕ ಮತ್ತೆ ಮತ್ತೆ ಅತ್ಯಾಚಾರ ಮಾಡಿದ್ದಾನೆ. ಈ ವಿಷಯ ಇಡೀ ಶಾಲೆಗೆ ಹರಡುವ ಭಯದಿಂದ ಹುಡುಗಿ ಈ ಬಗ್ಗೆ ಯಾರ ಬಳಿಯೂ ಹೇಳಿಲ್ಲ. ಇದು ಆರೋಪಿ ವಿದ್ಯಾರ್ಥಿಯ ಮನೋಬಲವನ್ನು ಹೆಚ್ಚಿಸಿತು, ಅಲ್ಲದೆ ಅವನ ಸಹಪಾಠಿಗಳು ಅತ್ಯಾಚಾರ ಎಸಗಲು ಪ್ರೇರೇಪಿಸಿದೆ. ಈ ವಿಷಯ ಶಾಲೆಯ ಶಿಕ್ಷಕ ಮತ್ತು ಪ್ರಾಂಶುಪಾಲರಿಗೆ ತಿಳಿದಾಗ ಆರೋಪಿತ ವಿದ್ಯಾರ್ಥಿಗಳನ್ನು ಸರಿಪಡಿಸುವ ಬದಲು ಇಬ್ಬರು ಶಿಕ್ಷಕರು ಮತ್ತು ಪ್ರಾಂಶುಪಾಲರು ಸಹ ಅತ್ಯಾಚಾರದಲ್ಲಿ ತೊಡಗಿದ್ದಾರೆ. ಈ ಅತ್ಯಾಚಾರ ಸತತವಾಗಿ ಆರೇಳು ತಿಂಗಳು ನಡೆದಿದೆ ಎಂದು ಪೊಲೀಸರು ತಿಳಿಸಿದರು.
14 ವರ್ಷದ ವಿದ್ಯಾರ್ಥಿನಿ ಈ ಘಟನೆ ಬಗ್ಗೆ ತಂದೆಗೆ ತಿಳಿಸಿದ್ದಾಳೆ. ವಿಷಯ ತಿಳಿದ ತಂದೆ ಶುಕ್ರವಾರ ಮಗಳ ಜೊತೆ ಮಹಿಳಾ ಪೊಲೀಸ್ ಠಾಣೆಗೆ ಮಾಹಿತಿ ನೀಡುವ ಮೂಲಕ ವಿದ್ಯಾರ್ಥಿಯ ಹೇಳಿಕೆಯನ್ನು ದಾಖಲಿಸಲಾಗಿದೆ. ಬಾಲಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಆಕೆಯನ್ನು ಚಾಪ್ರದದಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೊಳಪಡಿಸಲಾಯಿತು. ಬಳಿಕ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.