ನವದೆಹಲಿ: ಚಾಲನಾ ಪರವಾನಗಿ, ಕಲಿಕೆ ಪರವಾನಗಿ, ವಾಹನ ಪರವಾನಗಿ ಮತ್ತು ನೋಂದಣಿಯ ಮಾನ್ಯತೆಯನ್ನು ಕೇಂದ್ರ ಸರ್ಕಾರ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಿದೆ. ಲಾಕ್ಡೌನ್ ಕಾರಣ ಈ ಎಲ್ಲಾ ದಾಖಲೆಗಳ ಸಿಂಧುತ್ವವನ್ನು ಎರಡನೇ ಬಾರಿಗೆ ವಿಸ್ತರಿಸಲಾಗಿದೆ. ಈ ಮೊದಲು ಕೇಂದ್ರವು ಮಾನ್ಯತೆಯನ್ನು ಜೂನ್ 30 ರವರೆಗೆ ವಿಸ್ತರಿಸಿತ್ತು. ಇದೀಗ ಮತ್ತೆ ಅದಕ್ಕೆ 3 ತಿಂಗಳು ವಿಸ್ತರಣೆ ನೀಡಲಾಗಿದೆ. ಈಗ ಈ ಎಲ್ಲಾ ದಾಖಲೆಗಳು ಸೆಪ್ಟೆಂಬರ್ 30ರವರೆಗೆ ಸಿಂಧುತ್ವ ಹೊಂದಿರಲಿವೆ.
ಅವಧಿ ವಿಸ್ತರಣೆಗೆ ಕಾರಣ ಏನು?
ಈ ಕುರಿತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಫೆಬ್ರುವರಿ 1 ರಂದು ಸಿಂಧುತ್ವ ಅವಧಿ ಮುಕ್ತಾಯಗೊಂಡ ಈ ದಾಖಲೆಗಳ ಸಿಂಧುತ್ವ ಅವಧಿಯನ್ನು ಸೆಪ್ಟೆಂಬರ್ 30ರವರೆಗೆ ಪರಿಗಣಿಸುವಂತೆ ಹೇಳಿದೆ. ಸರ್ಕಾರದ ಈ ನಿರ್ಧಾರದಿಂದ ದೇಶಾದ್ಯಂತ ಇರುವ ಲಕ್ಷಾಂತರ ಜನರಿಗೆ ಭಾರಿ ನೆಮ್ಮದಿ ಸಿಕ್ಕಂತಾಗಿದೆ. ಈ ಕುರಿತು ಮಾಹಿತಿ ನೀಡಿರುವ ಸರ್ಕಾರ ಲಾಕ್ ಡೌನ್ ನಿಂದ ಮನೆಯಲ್ಲಿ ಸಿಲುಕಿಕೊಂಡು ತಮ್ಮ ದಾಖಲೆಗಳನ್ನು ನವೀಕರಿಸಲು ಆಗದೆ ಇರುವ ನಾಗರಿಕರನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಯಾವ ಯಾವ ದಾಖಲೆಗಳು ಶಾಮೀಲಾಗಿವೆ
ಸಿಂಧುತ್ವ ಅವಧಿಯನ್ನು ವಿಸ್ತರಿಸಲಾಗಿರುವ ದಾಖಲೆಗಳಲ್ಲಿ ಮೋಟಾರ್ ವಾಹನ ಕಾಯ್ದೆಯಡಿಯ ಫಿಟ್ನೆಸ್ ಪ್ರಮಾಣ ಪತ್ರ, ಎಲ್ಲ ರೀತಿಯ ಪರವಾನಿಗೆ, ಡ್ರೈವಿಂಗ್ ಲೈಸನ್ಸ್, ರೆಜಿಸ್ಟ್ರೇಶನ್ ಅಥವಾ ಇತರೆ ಆವಶ್ಯಕ ದಾಖಲೆಗಳು ಶಾಮೀಲಾಗಿವೆ ಎಂದು ಕೇಂದ್ರ ಸರ್ಕಾರ ತನ್ನ ಆದೇಶದಲ್ಲಿ ಹೇಳಿದೆ. ಮೋಟಾರ್ ವಾಹನ ಕಾಯ್ದೆ 1988 ಹಾಗೂ ಕೇಂದ್ರ ಮೋಟಾರ್ ವಾಹನ ಕಾಯ್ದೆ 1989 ರಲ್ಲಿ ದಾಖಲೆಗಳ ಸಿಂಧುತ್ವ ಅವಧಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಇಂತಹುದರಲ್ಲಿ RC ಹಾಗೂ ಡ್ರೈವಿಂಗ್ ಲೈಸನ್ಸ್ ಗಳೂ ಕೂಡ ಇದರ ಅಡಿ ಬರಲಿದ್ದು, ಇವುಗಳ ಸಿಂಧುತ್ವ ಅವಧಿಯನ್ನೂ ಕೂಡ ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಒಂದು ವೇಳೆ ನಿಮ್ಮ RC ಹಾಗೂ ಡ್ರೈವಿಂಗ್ ಲೈಸನ್ಸ್ ಸಿಂಧುತ್ವ ಅವಧಿ ಕೂಡ ಮುಕ್ತಾಯಗೊಂಡಿದ್ದರೆ, ಚಿಂತಿಸುವ ಅಗತ್ಯವಿಲ್ಲ.