ಚೆನ್ನೈ: ತಮ್ಮ ಹನಿಮೂನ್'ಗಾಗಿ ಬ್ರಿಟನ್ ಮೂಲದ ದಂಪತಿಗಳು ಇಡೀ ರೈಲನ್ನೇ ಬುಕ್ ಮಾಡಿ ಪ್ರಯಾಣಿಸಿ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ತಮಿಳುನಾಡಿನ ಮೆಟ್ಟುಪಾಳ್ಯಂನಿಂದ ಊಟಿ ನಡುವೆ ಸಂಚರಿಸುವ ಟಾಯ್ ಟ್ರೈನ್'ನ ಎಲ್ಲಾ ಟಿಕೆಟ್ ಗಳನ್ನು ಬುಕ್ ಮಾಡುವ ಮೂಲಕ ನೀಲಗಿರಿ ಬೆಟ್ಟಗಳ ನಡುವೆ ತಮ್ಮ ಹನಿಮೂನ್ ಅನ್ನು ಶುಕ್ರವಾರ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಈ ವಿಶೇಷ ಪ್ರಯಾಣಕ್ಕೆ ಅವರು ತೆತ್ತ ಬೆಲೆ ಎಷ್ಟು ಗೊತ್ತೇ? ಬರೋಬ್ಬರು 2.50ಲಕ್ಷ ರೂ.!
ಐಆರ್ಸಿಟಿಸಿ ಆರಂಭಿಸಿರುವ ಹೊಸ ಯೋಜನೆ ಅನ್ವಯ ಯಾರು ಬೇಕಾದರೂ, ಪೂರ್ಣ ಶುಲ್ಕ ಪಾವತಿಸಿ ಅಷ್ಟೂ ಟಿಕೆಟ್ ಖರೀದಿಸಿ ಅದರಲ್ಲಿ ಪ್ರಯಾಣಿಸಬಹುದಾಗಿದೆ. ಅದರಂತೆ ಗ್ರಹಾಂ ವಿಲಿಯಂ ಲಿನ್(30) ಹಾಗೂ ಸಿಲ್ವಿಯಾ ಪ್ಲಾಸಿಕ್(27) ದಂಪತಿ 2.85ಲಕ್ಷ ರೂ. ಪಾವತಿಸಿ ಇಡೀ ರೈಲನ್ನೇ ಬುಕ್ ಮಾಡಿದ್ದರು.
"ನಮಗೆ ಭಾರತ ಎಂದರೆ ಬಹಳ ಇಷ್ಟ. ಹಾಗಾಗಿ ನಮ್ಮ ಮಧುಚಂದ್ರವನ್ನು ಭಾರತದಲ್ಲಿ ಆಚರಿಸಿಕೊಳ್ಳುವ ಉದ್ದೇಶದಿಂದ ಭಾರತಕ್ಕೆ ಬಂದಿದ್ದೇವೆ" ಎಂದು ದಂಪತಿ ಹೇಳಿದ್ದಾರೆ. ಎರಡು ವಾರಗಳ ಹಿಂದಷ್ಟೇ ವಿವಾಹವಾಗಿರುವ ಈ ಜೋಡಿ ತಮ್ಮ ಸ್ನೇಹಿತೆ ಬೆಟ್ಟಗುಡ್ಡಗಳ ನಡುವೆ ಪ್ರಯಾಣಕ್ಕೆ ನೀಲಗಿರಿ ಬೆಟ್ಟಗಳು ಹೇಳಿಮಾಡಿಸಿದ್ದು, ಬಹಳ ಸುಂದರವಾದ ಸ್ಥಳ ಎಂದು ಸಲಹೆ ನೀಡಿದ ಹಿನ್ನೆಲೆಯಲ್ಲಿ ಈ ದಂಪತಿ ಭಾರತಕ್ಕೆ ಬಂದಿದ್ದರು ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಹಾ, "ಈ ಸುಂದರವಾದ ದೇಶವನ್ನು ನೋಡುವುದು ನಮ್ಮ ಕನಸಾಗಿತ್ತು. ಭಾರತದಲ್ಲಿ 28 ವರ್ಷಗಳ ಕಾಲ ಇದ್ದ ನಮ್ಮ ಸ್ನೇಹಿತ ನೀಲಗಿರಿ ಪರ್ವತಗಳ ಬಗ್ಗೆ ತಿಳಿಸಿದ್ದರು. ಹಾಗೆಯೇ ಇಲ್ಲಿನ ಸ್ಟೀಮ್ ಇಂಜಿನ್ ರೈಲುಗಳನ್ನು ನೋಡುವುದು ನಮ್ಮ ಉದ್ದೇಶವಾಗಿತ್ತು. ಹಾಗಾಗಿ ನಾವು ನಮ್ಮ ಹನಿಮೂನ್ ಅನ್ನು ಇಲ್ಲಿಯೇ ಆಚರಿಸಿಕೊಳ್ಳಲು ನಿರ್ಧರಿಸಿ ಭಾರತಕ್ಕೆ ಆಗಮಿಸಿದೆವು" ಎಂದು ಹೇಳಿದ್ದಾರೆ.
ಅಲ್ಲದೆ, ವಿಶೇಷ ರೈಲಿನಲ್ಲಿ ದಂಪತಿಗಲಿಬ್ಬರೇ ಸಂಚರಿಸಿದ್ದು ಅದ್ಭುತ ಅನುಭವ ಎಂದು ದಂಪತಿಗಳು ಅಭಿಪ್ರಾಯ ಹಂಚಿಕೊಂಡಿದ್ದಾರೆ.