ನವದೆಹಲಿ: ಚೀನಾದ ಹೊರಗೆ ಕೊರೊನಾವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತವು ತನ್ನ ಅತಿ ದೊಡ್ಡ ಕಡಲಾಭ್ಯಾಸ 'ಮಿಲನ್' ನ್ನು ಮುಂದೂಡಲು ನಿರ್ಧರಿಸಿದೆ ಎಂದು ಇಬ್ಬರು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೊದಲೇ ನಿಗದಿಯಾದಂತೆ ಮಾರ್ಚ್ 19 ರಿಂದ ಮಾರ್ಚ್ 28 ರವರೆಗೆ ಬಹು ರಾಷ್ಟ್ರಗಳ ನೌಕಾ ಕಸರತ್ತುಗಳನ್ನು ವಿಶಾಖಪಟ್ಟಣಂ ಕರಾವಳಿಯಲ್ಲಿ ಪ್ರದರ್ಶಿಸಬೇಕಿತ್ತು.
ಈಗ ಕರೋನಾ ವೈರಸ್ ಭೀತಿಯಿಂದಾಗಿ ಈ ಅಭ್ಯಾಸವನ್ನು ಮುಂದೂಡಲಾಗುತ್ತಿದೆ.ಆದರೆ ನೂತನ ದಿನಾಂಕಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ 'ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಹೊಸ ಕರೋನಾ ವೈರಸ್ ಪ್ರಕರಣಗಳು ಪತ್ತೆಯಾದ ಕಾರಣ ಹಲವಾರು ನೌಕಾಪಡೆಗಳು ವ್ಯಾಯಾಮದಲ್ಲಿ ಭಾಗವಹಿಸಲು ಅಸಮರ್ಥತೆಯನ್ನು ಸೂಚಿಸಿದ ನಂತರ ಈ ಡ್ರಿಲ್ ಅನ್ನು ಮುಂದೂಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು. ಸುಮಾರು 40 ದೇಶಗಳು ಈ ವ್ಯಾಯಾಮದಲ್ಲಿ ಭಾಗವಹಿಸಲು ನಿರ್ಧರಿಸಲಾಗಿತ್ತು, ಆದರೆ ಚೀನಾವನ್ನು ಡ್ರಿಲ್‌ಗಳಿಗೆ ಆಹ್ವಾನಿಸಲಾಗಿಲ್ಲ.
ಈ ವ್ಯಾಯಾಮವನ್ನು ಸಾಂಪ್ರದಾಯಿಕವಾಗಿ ಪೋರ್ಟ್ ಬ್ಲೇರ್‌ನಿಂದ ಪ್ರದರ್ಶಿಸಲಾಯಿತು, ಆದರೆ ಈ ವರ್ಷ ಪೂರ್ವ ಸಮುದ್ರ ತೀರಕ್ಕೆ ಸ್ಥಳಾಂತರಿಸಲಾಯಿತು ಏಕೆಂದರೆ ಇದು ದೊಡ್ಡ ಡ್ರಿಲ್‌ಗಳನ್ನು ನಡೆಸಲು ಉತ್ತಮ ಸ್ಥಳಾವಕಾಶವನ್ನು ನೀಡುತ್ತದೆ ಎನ್ನಲಾಗಿದೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ನೌಕಾ ಚಟುವಟಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಿಲನ್ ಕಾರ್ಯಾಚರಣೆಯನ್ನು ಆಯೋಜಿಸಲಾಗಿದೆ.
ಈ ಮಿಲನ್ ಕಾರ್ಯಾಚರಣೆಯಲ್ಲಿ ಪ್ರಮುಖವಾಗಿ ಇಂಡೋನೇಷ್ಯಾ, ಫ್ರಾನ್ಸ್, ಮೊಜಾಂಬಿಕ್, ಸುಡಾನ್, ಇಸ್ರೇಲ್, ಕತಾರ್, ಥೈಲ್ಯಾಂಡ್, ಮಲೇಷ್ಯಾ, ಆಸ್ಟ್ರೇಲಿಯಾ, ಸೊಮಾಲಿಯಾ, ಕೀನ್ಯಾ, ಈಜಿಪ್ಟ್, ಶ್ರೀಲಂಕಾ, ವಿಯೆಟ್ನಾಂ, ಮ್ಯಾನ್ಮಾರ್, ನ್ಯೂಜಿಲೆಂಡ್, ಯುಎಸ್, ಟಾಂಜಾನಿಯಾ, ಕೊಮೊರೊಸ್, ಮಾಲ್ಡೀವ್ಸ್ , ಬ್ರೂನಿ, ಫಿಲಿಪೈನ್ಸ್, ಜಪಾನ್, ಯುಕೆ, ಸೌದಿ ಅರೇಬಿಯಾ, ಓಮನ್, ಮಾರಿಷಸ್, ಕಾಂಬೋಡಿಯಾ, ಸಿಂಗಾಪುರ್, ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾ, ಕುವೈತ್, ಇರಾನ್, ಮಡಗಾಸ್ಕರ್, ಬಾಂಗ್ಲಾದೇಶ, ರಷ್ಯಾ, ಜಿಬೌಟಿ, ಎರಿಟ್ರಿಯಾ, ಬಹ್ರೇನ್, ಯುಎಇ ಮತ್ತು ಸೀಶೆಲ್ಸ್ ದೇಶಗಳು ಭಾಗವಾಗಿರಲಿವೆ ಎನ್ನಲಾಗಿದೆ.
ಈ ಮೇಲಿನ ಕೆಲವು ಆಹ್ವಾನಿತ ದೇಶಗಳಲ್ಲಿ ಕರೋನಾ ವೈರಸ್ ಪ್ರಕರಣಗಳ ಹೆಚ್ಚಳವಾಗಿದ್ದರಿಂದ ಈ ಅಭ್ಯಾಸವನ್ನು ಮುಂದೂಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.