ನವದೆಹಲಿ: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಮ್ಮ 67ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಹೃದಯಾಘಾತದಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಸುಷ್ಮಾ ಸ್ವರಾಜ್ ಮಂಗಳವಾರ ರಾತ್ರಿ ವಿಧಿವಶರಾದರು.
ಬಿಜೆಪಿಯ ಹಿರಿಯ ನಾಯಕಿ, ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮಂಗಳವಾರ ಸಂಜೆ ಹೃದಯಾಘಾತವಾಯಿತು. ತಕ್ಷಣವೇ ದೆಹಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುಷ್ಮಾ ಸ್ವರಾಜ್ ಮೃತಪಟ್ಟಿದ್ದಾರೆ.
ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಸುಷ್ಮ ಸ್ವರಾಜ್, 2014ರಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದಾಗ ನರೇದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿ 5 ವರ್ಷ ಪೂರೈಸಿದ್ದರು.
ಬಿಜೆಪಿಯ ಹಿರಿಯ ಮಹಿಳಾ ನಾಯಕಿಯಾಗಿದ್ದ ಸುಷ್ಮಾ ಸ್ವರಾಜ್ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಕಾರಣದಿಂದಾಗಿಯೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಾ ಕಣದಿಂದ ದೂರ ಉಳಿದಿದ್ದರು. ಜೊತೆಗೆ ಅನಾರೋಗ್ಯದಿಂದಾಗಿಯೇ ಮಂತ್ರಿ ಸ್ಥಾನವನ್ನೂ ನಿರಾಕರಿಸಿದ್ದರು.
ತಮ್ಮ ಕೊನೆಯ ಟ್ವೀಟ್‌ನಲ್ಲಿ ಕಾಶ್ಮೀರ ಕುರಿತು ಸರ್ಕಾರ ಕೈಗೊಂಡ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಸುಷ್ಮಾ ಸ್ವರಾಜ್ ಅಭಿನಂದಿಸಿದ್ದಾರೆ. ನಾನು ನನ್ನ ಜೀವನದುದ್ದಕ್ಕೂ ಈ ದಿನಕ್ಕಾಗಿ ಕಾಯುತ್ತಿದ್ದೆ. @ನರೇಂದ್ರಮೋದಿ ಜೀ ಥ್ಯಾಂಕ್ಯೂ ನರೇಂದ್ರ ಮೋದಿ, ಥ್ಯಾಂಕ್ಯೂ ಪ್ರೈಮ್ ಮಿನಿಸ್ಟರ್. ಥ್ಯಾಂಕ್ಯೂ. ನನ್ನ ಜೀವನದಲ್ಲಿ ಇಂಥ ದಿನವನ್ನು ನೋಡುವುದಕ್ಕೆ ಕಾಯುತ್ತಿದ್ದೆ ಎಂದು ಟ್ವೀಟ್ ಮಾಡಿದ್ದರು.