ರಾಂಚಿ: ಕೊರೊನಾ ಬಿಕ್ಕಟ್ಟಿನ ಈ ಕಾಲದಲ್ಲಿ ಒಂದೆಡೆ ವಿವಿಧ ರಾಜ್ಯಗಳ ಸರ್ಕಾರಗಳು ಈ ಸಾಂಕ್ರಾಮಿಕ ರೋಗದಿಂದ ಬಚಾವಾಗಲು ವಿವಿಧ ನಿಯಮಗಳ ಮೂಲಕ ಜನರನ್ನು ರಕ್ಷಿಸಲು ಪ್ರಯತ್ನಗಳನ್ನು ನಡೆಸುತ್ತಿದ್ದರೆ. ಇನ್ನೊಂದೆಡೆ ಝಾರ್ಖಂಡ್ ನಿಂದ ಒಂದು ದೊಡ್ಡ ಸುದ್ದಿ ಹೊರಹೊಮ್ಮಿದೆ. ಹೌದು, ಇಲ್ಲಿನ ಹೇಮಂತ್ ಸೊರೆನ್ ನೇತೃತ್ವದ ರಾಜ್ಯ ಸರ್ಕಾರ, ರಾಜ್ಯದಲ್ಲಿ ಮಾಸ್ಕ್ ಧರಿಸದೆ ಸುತ್ತಾಡುವವರಿಗೆ 1 ಲಕ್ಷ ರೂ. ದಂಡ ವಿಧಿಸಲಾಗುವುದು ಹಾಗೂ ಲಾಕ್ ಡೌನ್ ನಿಯಮ ಉಲ್ಲಂಘನೆಯ ಆರೋಪದ ಮೇಲೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುದು ಎಂಬ ಸುಗ್ರೀವಾಜ್ಞೆ ಹೊರಡಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಝಾರ್ಖಂಡ್ ಕ್ಯಾಬಿನೆಟ್ ಸಾಂಕ್ರಾಮಿಕ ರೋಗ ಸುಗ್ರೀವಾಜ್ಞೆ 2020ಕ್ಕೆ ಅನುಮೋದನೆ ನೀಡಿದೆ. ಈ ಆದೇಶದ ಅಡಿ ನೂತನ ನಿಯಮ ಜಾರಿಗೆ ಬರಲಿದೆ. ದೇಶದ ವಿವಿಧ ರಾಜ್ಯಗಳಂತೆ ಝಾರ್ಖಂಡ್ ನಲ್ಲಿಯೂ ಕೂಡ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಲೇ ಇದೆ. ಈ ಹಿನ್ನೆಲೆ ರಾಜ್ಯದ ಹೇಮಂತ್ ಸೊರೆನ್ ನೇತೃತ್ವದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಈಗಾಗಲೇ ಕೊರೊನಾ ಮಹಾಮಾರಿಯ ಹೊಡೆತಕ್ಕೆ ತತ್ತರಿಸಿ ಹೋಗಿರುವ ರಾಜ್ಯದ ಬಡ ಜನರು ಇಷ್ಟೊಂದು ದೊಡ್ಡ ಪ್ರಮಾಣದ ದಂಡ ಹೇಗೆ ಪಾವತಿಸಲಿದ್ದಾರೆ ಎಂಬ ಕೂಗು ಇದೀಗ ಎಲ್ಲೆಡೆಯಿಂದ ಕೇಳಿ ಬರಲಾರಂಭಿಸಿದ. ರಾಜ್ಯ ಸರ್ಕಾರದ ಈ ಆದೇಶ ವಿವಾದಕ್ಕೆ ಕಾರಣವಾಗುತ್ತಿದ್ದಂತೆ, ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಆರೋಗ್ಯ ಸಚಿವ ಬನ್ನಾ ಗುಪ್ತಾ, " ಇನ್ನೂ ಈ ಸುಗ್ರೀವಾಜ್ಞೆ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ, ಸುಗ್ರೀವಾಜ್ನೆಯಲ್ಲಿ ಉಲ್ಲೇಖಿಸಲಾಗಿರುವ ದಂಡದ ಮೊತ್ತ ಕೇವಲ ಯಾವುದೇ ಒಂದು ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿ, ಆ ವ್ಯಕ್ತಿ ಪ್ರಕರಣದಲ್ಲಿ ದೋಷಿ ಎಂದು ತೀರ್ಮಾನವಾದಾಗ ಮಾತ್ರ ವಿಧಿಸಲಾಗುವುದು. ಯಾವುದೇ ಓರ್ವ ವ್ಯಕ್ತಿಯನ್ನು ಸ್ಪಾಟ್ ಚೆಕಿಂಗ್ ಮೂಲಕ ಹಿಡಿದು ಅವರಿಗೆ ಈ ದಂಡ ಹಾಗು ಶಿಕ್ಷೆ ವಿಧಿಸಲಾಗುವುದು ಎಂದಲ್ಲ" ಎಂದಿದ್ದಾರೆ. ಇದೇ ವೇಳೆ ನಮ್ಮ ಸರ್ಕಾರ ಸಂಪೂರ್ಣ ಜವಾಬ್ದಾರಿಯಿಂದ ಕೊರೊನಾ ವಿರುದ್ಧದ ಹೋರಾಟ ನಡೆಸುತ್ತಿದೆ ಎಂದೂ ಕೂಡ ಅವರು ಹೇಳಿದ್ದಾರೆ.