ಭುವನೇಶ್ವರ: ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಫೋನಿ ಚಂಡಮಾರುತದ ಅಬ್ಬರ ಹೆಚ್ಚಾಗಿದೆ. ಜನಜೀವನ ತೀವ್ರ ಅಸ್ತವ್ಯಸ್ತಗೊಂಡಿದ್ದು ಸುಮಾರು 11 ಲಕ್ಷಕ್ಕೂ ಅಧಿಕ ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಏತನ್ಮಧ್ಯೆ ಭುವನೇಶ್ವರದ ಮಂಚೆಶ್ವರ್ದಲ್ಲಿನ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಗುವಿಗೆ ಪೋಷಕರು 'ಫೋನಿ' ಎಂದು ನಾಮಕರಣ ಮಾಡಿದ್ದಾರೆ.
ಮಂಚೇಶ್ವರ್ ನಲ್ಲಿರುವ ರೈಲ್ವೇ ಕೋಚ್ ರಪೇರಿ ವರ್ಕ್ಶಾಪ್ನಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ 32 ವರ್ಷದ ಮಹಿಳೆ ಇಂದು ಬೆಳಿಗ್ಗೆ ಸುಮಾರು 11 ಗಂಟೆ ಸಮಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯಕ್ಕೆ ಫೋನಿ ಚಂಡಮಾರುತ ಅಪ್ಪಳಿಸಿದ್ದರಿಂದ, ಆ ಘಳಿಗೆಯಲ್ಲಿಯೇ ಹುಟ್ಟಿದ ಮಗುವಿಗೆ 'ಫೋನಿ' ಎಂದೇ ಹೆಸರಿಟ್ಟಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಆಸ್ಪತ್ರೆ ವೈದ್ಯಕೀಯ ನಿರ್ದೇಶಕರಾದ ಡಾ.ಅರುಂಧತಿ ಸೇನಾಪತಿ, "ಫೋನಿ ಚಂಡಮಾರುತ ಅಪ್ಪಳಿಸಿದ ಸಮಯದಲ್ಲಿಯೇ ಹೆಣ್ಣು ಮಗು ಜನಿಸಿದ್ದರಿಂದ 'ಫೋನಿ' ಎಂದು ನಾಮಕರಣ ಮಾಡಿದ್ದಾರೆ. ಸದ್ಯ ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ" ಎಂದಿದ್ದಾರೆ.