ಶ್ರೀನಗರ: ನೂತನ ಸರ್ಕಾರ ರಚನೆ ಸಂಬಂಧ ನಮ್ಮನ್ನು ಯಾರು ಸಂಪರ್ಕಿಸಿಲ್ಲ ಮತ್ತು ಯಾರನ್ನೂ ನಾವು ಸಂಪರ್ಕಿಸುವುದಿಲ್ಲ ಎಂದು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫೆರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಹೇಳಿದ್ದಾರೆ.
ಸರ್ಕಾರ ಪತನದ ನಂತರ ರಾಜ್ಯಪಾಲ ಎನ್.ಎನ್.ವೋಹ್ರಾ ಅವರನ್ನು ಭೇಟಿ ಮಾಡಿದ ಓಮರ್ ಅಬ್ದುಲ್ಲಾ, ನಂತರ ಸುದ್ದಿಗಾರರೊಂದಿಗೆ ಮಾತನಾಡಿ, "ನಾನು ರಾಜ್ಯಪಾಲರನ್ನು ಭೇಟಿಯಾದೆ. 2014ರಲ್ಲಿ ಸರಕಾರ ರಚಿಸಲು ನ್ಯಾಷನಲ್ ಕಾನ್ಫರೆನ್ಸ್ ಜನಮತವನ್ನು ಪಡೆದಿರಲಿಲ್ಲ ಎಂದು ಅವರಿಗೆ ಹೇಳಿದೆ. 2018ರಲ್ಲೂ ನಮಗೆ ಜನಮತವಿಲ್ಲ. ನಮ್ಮನ್ನು ಯಾರೂ ಸಂಪರ್ಕಿಸಿಲ್ಲ. ನಾವು ಯಾರನ್ನೂ ಸಂಪರ್ಕಿಸುತ್ತಲೂ ಇಲ್ಲ" ಎಂದು ತಿಳಿಸಿರುವುದಾಗಿ ಹೇಳಿದರು.
ಮುಂದುವರೆದು ಮಾತನಾಡಿದ ಅವರು "ಪ್ರಸ್ತುತ ಸ್ಥಿತಿಯಲ್ಲಿ ಸರ್ಕಾರ ರಚಿಸುವಷ್ಟು ಬಹುಮತ ಯಾವುದೇ ಪಕ್ಷಕ್ಕೆ ಇಲ್ಲ. ಹಾಗಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲೇಬೇಕಿದೆ. ಅಲ್ಲದೆ, ಮತ್ತೊಮ್ಮೆ ಚುನಾವಣೆ ನಡೆಸಬೇಕು" ಎಂದು ರಾಜ್ಯಪಾಲರಲ್ಲಿ ಮನವಿ ಮಾಡಿರುವುದಾಗಿ ಓಮರ್ ಅಬ್ದುಲ್ಲಾ ವಿವರಿಸಿದರು.
ಜಮ್ಮು-ಕಾಶ್ಮೀರದಲ್ಲಿ ಪಿಡಿಪಿಗೆ ಬಿಜೆಪಿ ಗುಡ್ ಬೈ; ಮುಖ್ಯಮಂತ್ರಿ ಮೆಹಬೂಬ ಮುಫ್ತಿ ರಾಜೀನಾಮೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ಚಟುವಟಿಕೆಗಳು ಮತ್ತು ಇತರ ವಿಚಾರಗಳಲ್ಲಿ ಭಿನ್ನಮತ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ಮಂಗಳವಾರ ಮೈತ್ರಿ ಸರ್ಕಾರದಿಂದ ಹೊರಬಂದಿದ್ದು, ಪಿಡಿಪಿಯ ಮೊಹಬೂಬಾ ಮುಫ್ತಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನೂತನ ಸರ್ಕಾರ ರಚಿಸುವ ಸಂಬಂಧ ರಾಜ್ಯಪಾಲರಿಗೆ ಓಮರ್ ಅಬ್ದುಲ್ಲಾ ತಮ್ಮ ನಿಲುವು ತಿಳಿಸಿದ್ದಾರೆ.
2014ರಲ್ಲಿ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಪಿಡಿಪಿ 28, ಬಿಜೆಪಿ 25, ನ್ಯಾಷನಲ್ ಕಾನ್ಫರೆನ್ಸ್ 15 ಮತ್ತು ಕಾಂಗ್ರೆಸ್ 12 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇತರರು 7 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ವಿಧಾನಸಭೆಯಲ್ಲಿ ಯಾರಿಗೂ ಬಹುಮತ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರ ರಚಿಸಿದ ಹಿನ್ನೆಲೆಯಲ್ಲಿ ಪಿಡಿಪಿಯ ಮೆಹಬೂಬಾ ಮುಫ್ತಿ ಮುಖ್ಯಮಂತ್ರಿಯಾಗಿದ್ದರು.