ನವದೆಹಲಿ: ಮಾನ್ಸೂನ್ ಹಂಗಮಾ ಆಫರ್ ಅಡಿಯಲ್ಲಿ ವಿಶೇಷ ಜಿಯೋಫೋನ್ ರೀಚಾರ್ಜ್ ಪ್ಲಾನ್ ಅನ್ನು ರಿಲಯನ್ಸ್ ಜಿಯೋ ಘೋಷಿಸಿದೆ. ಈ ಪ್ಲಾನ್ ಆಕ್ಟಿವೇಶನ್ ಸಮಯದಲ್ಲಿ 594 ರೂ. ಪಾವತಿಸಿ ರಿಚಾರ್ಜ್ ಮಾಡಿಸಿದರೆ ಬಳಕೆದಾರರು 6 ತಿಂಗಳವರೆಗೆ ಅನಿಯಮಿತ ಧ್ವನಿ ಮತ್ತು ಡೇಟಾ ಸೌಲಭ್ಯ ಪಡೆಯಬಹುದು.
ಅಲ್ಲದೆ, ಮಾನ್ಸೂನ್ ಹಂಗಮಾ ಎಕ್ಸ್'ಚೇಂಜ್ ಆಫರ್ ಅಡಿಯಲ್ಲಿ ಬರುವ ಜಿಯೋಫೋನ್ ಬಳಕೆದಾರರಿಗೆ ರೂ. 101 ಮೌಲ್ಯದ 6GB ಡೇಟಾ ವೋಚರ್ ಹೆಚ್ಚುವರಿಯಾಗಿ ದೊರೆಯಲಿದೆ. ಈ 6 ತಿಂಗಳ ಪ್ಲಾನ್ನಲ್ಲಿ 90 ಜಿಬಿ ಡೇಟಾ ಪಡೆಯಬಹುದು.
"ಪ್ರಸ್ತುತ 49ರೂ. ಮತ್ತು 153ರೂಗಳ 2 ಯೋಜನೆಗಳು ಲಭ್ಯವಿವೆ. ರೂ.49 ಯೋಜನೆಯಲ್ಲಿ ಮಾಸಿಕ 1 ಜಿಬಿ ಡೇಟಾ ದೊರೆಯಲಿದೆ. ಆದರೆ ರೂ.153 ಪ್ಲಾನ್'ನಲ್ಲಿ ಪ್ರತಿನಿತ್ಯ 1.5ಜಿಬಿ ಡೇಟಾ ದೊರೆಯಲಿದೆ. ಬಳಕೆದಾರರು ಅತಿ ಕಡಿಮೆ ಬೆಲೆಗೆ ಹೆಚ್ಚು ಪ್ರಯೋಜನಗಳನ್ನು ಪಡೆಯಲು ಬಯಸುತ್ತಾರೆ. ಅದಕ್ಕಾಗಿ 99ರೂ. ಪ್ಲಾನ್'ನಲ್ಲಿ ಅನಿಯಮಿತ ಕರೆ, ಪ್ರತಿನಿತ್ಯ 0.5ಜಿಬಿ ಡೇಟಾ ಮತ್ತು 300ಎಸ್ಎಂಎಸ್ಗಳನ್ನೂ 28 ದಿನಗಳವರೆಗೆ ಪಡೆಯಬಹುದು. ಇದು ಮಾಸಿಕ ವೆಚ್ಚವನ್ನು ಶೇ.50ರಷ್ಟು ಕಡಿಮೆಗೊಳಿಸಲಿದೆ" ಎಂದು ಜಿಯೋ ಕಂಪನಿ ವಕ್ತಾರ ತಿಳಿಸಿದ್ದಾರೆ.
ಬಿಲಿಯನೇರ್ ಮುಖೇಶ್ ಅಂಬಾನಿ ಜುಲೈ 5 ರಂದು 'ಜಿಯೋಫೋನ್ ಮಾನ್ಸೂನ್ ಹಂಗಮಾ' ಆಫರ್ ಘೋಷಿಸಿದ್ದರು. ರಿಲಯನ್ಸ್ ಇಂಡಸ್ಟ್ರೀಸ್ನ 41 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕೇವಲ 501 ರೂ.ಗೆ ನೂತನ ಜಿಯೋಫೋನ್ ಬಿಡುಗಡೆ ಮಾಡಿದ್ದರು. ಆಗಸ್ಟ್ 15 ರಿಂದ 2.999 ರೂ.ಗಳಿಗೆ ಜಿಯೋಫೋನ್ 2 ಲಭ್ಯವಾಗಲಿದೆ.