ನವದೆಹಲಿ: ದೇಶಾದ್ಯಂತ ಹಿಂದಿ ಸಾಮಾನ್ಯ ಭಾಷೆಯಾಗಬೇಕೆಂದು ಗೃಹ ಸಚಿವ ಅಮಿತ್ ಶಾ ಪ್ರತಿ ಪಾದಿಸುತ್ತಿರುವ ಬೆನ್ನಲ್ಲೇ ಈಗ ತಮಿಳುನಾಡಿನ ಬಿಜೆಪಿ ನಾಯಕ ಪೊನ್ ರಾಧಾಕೃಷ್ಣನ್ ಅವರು ತಮಿಳು ಭಾಷೆಯನ್ನು ರಾಷ್ಟ್ರೀಯ ಭಾಷೆಯಾಗಿ ಗುರುತಿಸಬೇಕೆಂದು ಪ್ರತಿಪಾದಿಸಿದರು.
"ನಾವು ನಮ್ಮ ಭಾಷೆಯನ್ನು ಅಭಿವೃದ್ಧಿಪಡಿಸಬೇಕು ಎಂಬುದು ನಮ್ಮ ಆಸೆ. ನಾವು ನಮ್ಮ ಭಾಷೆಯ ಸ್ಥಿತಿಯನ್ನು ಸುಧಾರಿಸಿದರೆ ಮತ್ತು ಅದು ಎಲ್ಲಾ ರಾಜ್ಯಗಳಲ್ಲಿ ಹರಡಿದರೆ, ತಮಿಳು ಕೂಡ ರಾಷ್ಟ್ರೀಯ ಭಾಷೆಯಾಗಬಹುದು ಎಂದು ಪೊನ್ ರಾಧಾಕೃಷ್ಣನ್ ಎಎನ್ಐಗೆ ತಿಳಿಸಿದ್ದಾರೆ. ಇದೇ ವೇಳೆ ನಾವು ಸಂವಹನಕ್ಕಾಗಿ ಒಂದು ಭಾಷೆಯನ್ನು ಮಾತ್ರ ಸ್ವೀಕರಿಸಬೇಕಾಗಿದೆ ಎಂದು ನರೇಂದ್ರ ಮೋದಿ ಸರ್ಕಾರದ ಮೊದಲ ಅಧಿಕಾರಾವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ರಾಧಾಕೃಷ್ಣನ್ ಹೇಳಿದರು.
ಸೆಪ್ಟೆಂಬರ್ 14 ರಂದು ಹಿಂದಿ ದಿವಸದ ಪ್ರಯುಕ್ತ ಹಿಂದಿಯನ್ನು ದೇಶಾದ್ಯಂತ ಸಾಮಾನ್ಯ ಭಾಷೆಯಾಗಿ ಗುರುತಿಸಬೇಕೆಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಇದಕ್ಕೆ ದಕ್ಷಿಣದ ರಾಜ್ಯಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಇದಾದ ನಂತರ ಅವರು ಸ್ಪಷ್ಟೀಕರಣ ನೀಡಿ ತಾವು ಎರಡನೇ ಭಾಷೆಯಾಗಿ ಹಿಂದಿಯನ್ನು ಕಲಿಯಿರಿ ಎಂದಷ್ಟೇ ಹೇಳಿರುವುದು ಹೊರತು ಯಾವುದೇ ಪ್ರಾದೇಶಿಕ ಭಾಷೆ ಮೇಲೆ ಹೇರುವುದು ಎಂದರ್ಥವಲ್ಲ ಎಂದು ತಿಳಿಸಿದರು.
ತಮಿಳಿನಾಡಿನಲ್ಲಿ ಡಿಎಂಕೆ ಸೆಪ್ಟೆಂಬರ್ 20 ರಂದು ಶಾ ಅವರ ಹೇಳಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಯೋಜಿಸಿತ್ತು. ಆದರೆ, ಗೃಹ ಸಚಿವರು ಸ್ಪಷ್ಟನೆ ನೀಡಿದ ನಂತರ ಪಕ್ಷ ಆಂದೋಲನವನ್ನು ಮುಂದೂಡಿದೆ.