ಚಂಡೀಗಢ: ಮಾದಕ ದ್ರವ್ಯಗಳ ವ್ಯಸನ ದೇಶಾದ್ಯಂತ ಸಾಮಾಜಿಕ ಪಿಡುಗಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಮದುವೆ ಗಂಡು ಕೂಡ ಮಾದಕದ್ರವ್ಯ ಪರೀಕ್ಷೆಗೆ ಒಳಗಾಗುವುದನ್ನು ಚಂಡೀಗಢ ಸರ್ಕಾರ ಕಡ್ಡಾಯಗೊಳಿಸಿದೆ.
ಹಲವು ವೈವಾಹಿಕ ಕಲಹಗಳಿಗೆ ಗಂಡಸರ ಮಾದಕದ್ರವ್ಯ ವ್ಯಸನವೇ ಕಾರಣ ಎಂಬುದನ್ನು ವಿವಿಧ ವಿಚ್ಚೇದನ ಪ್ರಕರಣಗಳಲ್ಲಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಕಂಡುಕೊಂಡಿದೆ. ಈ ಹಿನ್ನೆಲೆಯಲ್ಲಿ ಅದು ಮದುವೆಗೂ ಮುನ್ನ ಗಂಡಿಗೆ ಮಾದಕ ವಸ್ತು ಪರೀಕ್ಷೆ ಮಾಡಬಹುದೇ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಿತ್ತು.
ಇದೀಗ ಅದನ್ನು ಚಂಡೀಗಢ ಸರ್ಕಾರ ಒಪ್ಪಿದ್ದು, ಮದುವೆ ಗಂಡನ್ನು ಮಾದಕದ್ರವ್ಯ ಪರೀಕ್ಷೆಗೆ ಒಳಪಡಿಸಲು ಕ್ರಮ ಕೈಗೊಳ್ಳು ವುದಾಗಿ ನ್ಯಾಯಾಲಯಕ್ಕೆ ತಿಳಿಸಿದೆ. ಮದುವೆ ಆಗುತ್ತಿರುವ ವರ ಮಾದಕ ದ್ರವ್ಯಗಳ ದುಶ್ಚಚಟಕ್ಕೆ ದಾಸನಾಗಿಲ್ಲ ಎನ್ನುವುದನ್ನು ಖಾತರಿ ಪಡಿಸಿಕೊಳ್ಳುವುದಕ್ಕಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾದಕ ದ್ರವ್ಯದ ತಪಾಸಣೆಗೆ ಸೌಲಭ್ಯ ಕಲ್ಪಿಸುವ ಸಂಬಂಧ ಪ್ರಮಾಣ ಪತ್ರ ಸಲ್ಲಿಸುವಂತೆ ಹರ್ಯಾಣ, ಪಂಜಾಬ್ ಹಾಗೂ ಚಂಡೀಗಢ ಆಡಳಿತಕ್ಕೆ ಕೋರ್ಟ್ ನೋಟಿಸ್ ಜಾರಿ ಮಾಡಲಾಗಿತ್ತು. ಹರ್ಯಾಣ ಹಾಗೂ ಪಂಜಾಬ್ ಸರ್ಕಾರಗಳು ಈಗಾಗಲೇ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿವೆ.