RCB vs SRH: ಹೀನಾಯ ಸೋಲಿನ ಬಳಿಕ ಡು ಪ್ಲೆಸಿಸ್ ಗೆ ಕೋಪ, ಹೇಳಿದ್ದೇನು..?

ಬೌಲಿಂಗ್‍ನಲ್ಲಿ ಮೇಲುಗೈ ಸಾಧಿಸಿದ ಹೈದರಾಬಾದ್ ತಂಡ ಡು ಪ್ಲೆಸಿಸ್‍ ಪಡೆಗೆ 9 ವಿಕೆಟ್‍ಗಳ ಹೀನಾಯ ಸೋಲಿನ ರುಚಿ ತೋರಿಸಿತು.

Written by - Puttaraj K Alur | Last Updated : Apr 24, 2022, 07:02 AM IST
  • ಸನ್‌ರೈಸರ್ಸ್ ಹೈದರಾಬಾದ್ ಎದುರು ಆರ್‌ಸಿಬಿ ತಂಡಕ್ಕೆ ಹೀನಾಯ ಸೋಲು
  • ಬ್ಯಾಟಿಂಗ್‍ನಲ್ಲಿ ವೈಫಲ್ಯ ಅನುಭವಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಫಾಫ್ ಡು ಪ್ಲೆಸಿಸ್
  • ಹೈದರಾಬಾದ್ ಬೌಲಿಂಗ್ ಪಡೆಯ ಬಗ್ಗೆ ಆರ್‌ಸಿಬಿ ಕ್ಯಾಪ್ಟನ್ ಮೆಚ್ಚುಗೆಯ ಮಾತು
RCB vs SRH: ಹೀನಾಯ ಸೋಲಿನ ಬಳಿಕ ಡು ಪ್ಲೆಸಿಸ್ ಗೆ ಕೋಪ, ಹೇಳಿದ್ದೇನು..? title=
ಫಾಫ್ ಡು ಪ್ಲೆಸಿಸ್ ಗೆ ಕೋಪ!

ಮುಂಬೈ: ಬ್ರರ್ಬೌನ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐಪಿಎಲ್ ಟೂರ್ನಿಯ 36ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ಎದುರು ಹೀನಾಯ ಸೋಲು ಕಂಡಿದೆ. ಟಾಸ್ ಗೆದ್ದ ಹೈದರಾಬಾದ್ ಫೀಲ್ಡಿಂಗ್ ಆಯ್ದುಕೊಂಡು ಆರ್‌ಸಿಬಿಯನ್ನು ಸಣ್ಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಬೌಲಿಂಗ್‍ನಲ್ಲಿ ಮೇಲುಗೈ ಸಾಧಿಸಿದ ಹೈದರಾಬಾದ್ ತಂಡ ಡು ಪ್ಲೆಸಿಸ್‍ ಪಡೆಗೆ 9 ವಿಕೆಟ್‍ಗಳ ಹೀನಾಯ ಸೋಲಿನ ರುಚಿ ತೋರಿಸಿತು.

ಹೈದರಾಬಾದ್ ಮಾರಕ ಬೌಲಿಂಗ್!

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್‌ಸಿಬಿ ತಂಡ ಹೈದರಾಬಾದ್ ಮಾರಕ ಬೌಲಿಂಗ್ ದಾಳಿಗೆ ಸಿಲುಕಿತು. ಆರ್‌ಸಿಬಿ ಪರ ಯಾವೊಬ್ಬ ಬ್ಯಾಟ್ಸ್ ಮನ್‍ ಕೂಡ ಹೆಚ್ಚು ಹೊತ್ತು ನಿಂತು ಆಡಲಿಲ್ಲ. ಘಟಾನುಘಟಿಗಳೇ ಎರಡಂಕಿ ಮೊತ್ತ ಗಳಿಸಿದರೆ ಕೈಕೊಟ್ಟು ನಿರಾಸೆ ಮೂಡಿಸಿದರು. ಪರಿಣಾಮ 16.1 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡ ಆರ್‌ಸಿಬಿ ಕೇವಲ 68 ರನ್ ಗಳಿಸಲಷ್ಟೇ ಶಕ್ತವಾಯಿತು. ಸುಲಭ ಗುರಿ ಬೆನ್ನತ್ತಿದ ಹೈದರಾಬಾದ್ 8 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು ಆಟವನ್ನು ಮುಗಿಸಿತು.

ಇದನ್ನೂ ಓದಿ: IPL 2022 : ಹಳ್ಳಿಯಿಂದ ಬಂದ ಈ ಆಟಗಾರ ಈಗ 'ಸಿಎಸ್‌ಕೆ ತಂಡ'ದ ಸ್ಪೋಟಕ ಬೌಲರ್! 

ಫಾಫ್ ಡು ಪ್ಲೆಸಿಸ್ ಗೆ ಕೋಪ!

ಪಂದ್ಯ ಮುಗಿದ ಬಳಿಕ ಆರ್‌ಸಿಬಿ ತಂಡದ ಹೀನಾಯ ಸೋಲಿನ ಕಾರಣವನ್ನು ನಾಯಕ ಫಾಫ್ ಡು ಪ್ಲೆಸಿಸ್ ತಿಳಿಸಿದ್ದಾರೆ. ‘ಮೊದಲ ಕೆಲವು ಓವರ್‌ಗಳಲ್ಲಿ ನಾವು ನಾಲ್ಕೈದು ವಿಕೆಟ್‌ಗಳನ್ನು ಕಳೆದುಕೊಂಡಿದ್ದು ಪಂದ್ಯವನ್ನು ಕಳೆದುಕೊಳ್ಳಲು ಮುಖ್ಯ ಕಾರಣ. ಆರಂಭದಲ್ಲಿ ನಾವು ತಾಳ್ಮೆಯಿಂದ ನೋಡಿಕೊಂಡು ಆಟವಾಡಬೇಕಿತ್ತು. ಆದರೆ ನಮ್ಮ ವಿರುದ್ಧ ಬೌಲರ್‍ ಗಳು ಮೇಲುಗೈ ಸಾಧಿಸಿದರು. ಎದುರಾಳಿ ತಂಡದ ಬೌಲಿಂಗ್ ದಾಳಿಯನ್ನು ತಡೆಯಲು ನಾವು ಒಂದು ಮಾರ್ಗವನ್ನು ಕಂಡುಕೊಳ್ಳಬೇಕಿತ್ತು. ಆದರೆ ನಾವು ಬ್ಯಾಟಿಂಗ್‍ ನಲ್ಲಿ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದೇವು. ಹೀಗಾಗಿ ಹೀನಾಯ ಸೋಲಿಗೆ ಕಾರಣವಾಯಿತು’ ಎಂದು ಹೇಳಿದ್ದಾರೆ.

‘ಆರಂಭದಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳದಿದ್ದರೆ ನಾವು ದೊಡ್ಡ ಸ್ಕೋರ್ ಗಳಿಸಬಹುದಿತ್ತು. ಈ ಪಿಚ್‌ನಲ್ಲಿ ಬ್ಯಾಟ್ ಮಾಡುವುದು ಸುಲಭ ಎಂದು ನಾವು ಭಾವಿಸಿದ್ದೇವೆ, ಆದರೆ ಯಾವುದೇ ಪಿಚ್‌ನಲ್ಲಿ ನೀವು ಆರಂಭಿಕ ಓವರ್‌ಗಳಲ್ಲಿ ಎಚ್ಚರಿಕೆಯಿಂದ ಆಟವಾಡಬೇಕು. ಸ್ವಲ್ಪವೇ ಎಚ್ಚರ ತಪ್ಪಿದರೂ ನಾವು ದೊಡ್ಡ ಬೆಲೆ ತೆರಬೇಕಾಗುತ್ತದೆ. ಅದೇ ರೀತಿ ನಾವು ಮಹತ್ವದ ಪಂದ್ಯದಲ್ಲಿ ಸೋಲು ಕಂಡಿದ್ದೇವೆ’ ಎಂದು ಡು ಪ್ಲೆಸಿಸ್ ಹೇಳಿದ್ದಾರೆ.

ಇದನ್ನೂ ಓದಿ: ನೋ ಬಾಲ್ ವಿವಾದ: ಅಂಪೈರ್ ವಿರುದ್ಧ ರಿಷಭ್ ಪಂತ್ ಅಸಮಾಧಾನ, ವಿಡಿಯೋ ವೈರಲ್

ಹೈದರಾಬಾದ್ ಬೌಲರ್‍ಗಳನ್ನು ಹೊಗಳಿದ ಡು ಪ್ಲೆಸಿಸ್

ಸನ್‌ರೈಸರ್ಸ್ ಹೈದರಾಬಾದ್ (SRH) ಬೌಲರ್ ಮಾರ್ಕೊ ಜೇಸನ್ ಅವರನ್ನು ಫಾಫ್ ಡು ಪ್ಲೆಸಿಸ್ ಹೊಗಳಿದ್ದಾರೆ. ಜೇಸನ್ ಮಾರಕ ಬೌಲಿಂಗ್ ಮಾಡುವ ಮೂಲಕ ಆರಂಭದಲ್ಲಿಯೇ ಆರ್‍ಸಿಬಿ ತಂಡಕ್ಕೆ ಆಘಾತವನ್ನುಂಟು ಮಾಡಿದರು. ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಮತ್ತು ಅನುಜ್ ರಾವತ್ ಪ್ರಮುಖ ವಿಕೆಟ್‍ಗಳನ್ನು ಪಡೆಯುವ ಮೂಲಕ ಆರ್‍ಸಿಬಿ ತಂಡದ ಬ್ಯಾಟಿಂಗ್ ಬೆನ್ನೆಲುಭನ್ನೇ ಮುರಿದುಹಾಕಿದರು. ಪರಿಣಾಮ ಆರ್‍ಸಿಬಿ ನಂತರ ಚೇತರಿಕೆ ಕಾಣದೆ ಸಣ್ಣ ಮೊತ್ತಕ್ಕೆ ಆಲೌಟ್‍ ಆಯಿತು. ಹೀಗಾಗಿ ಹೈದರಾಬಾದ್ ಬೌಲರ್‍ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು ಎಂದು ಡು ಪ್ಲೆಸಿಸ್ ಹೇಳಿದ್ದಾರೆ.  

ಬೌಲರ್‍ಗಳೇ ಹೀರೋಗಳು ಎಂದ ಕೇನ್ ವಿಲಿಯಮ್ಸನ್

ಇನ್ನು ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮಾತನಾಡಿ, ಬೌಲರ್‍ಗಳನ್ನು ಹೀರೋಗಳು ಎಂದು ಹೇಳಿದ್ದಾರೆ. ಬಲಿಷ್ಠ ತಂಡವನ್ನು ಸಣ್ಣ ಮೊತ್ತಕ್ಕೆ ಕಟ್ಟಿಹಾಕುವುದು ಸುಲಭದ ಮಾತಲ್ಲ. ಆರ್‍ಸಿಬಿ ಬಲಿಷ್ಠ ತಂಡವಾಗಿದ್ದು, ಬೌಲಿಂಗ್‍ನಲ್ಲಿಯೇ ಅವರನ್ನು ನಾವು ಸೋಲಿಸಬೇಕಾಗಿತ್ತು. ನಮ್ಮ ಬೌಲರ್‍ಗಳು ಸಹ ಅದರಂತೆ ಉತ್ತಮ ಬೌಲಿಂಗ್ ಮಾಡಿದರು. ಹೀಗಾಗಿ ನಾವು ಸುಲಭವಾಗಿ ಗೆಲುವು ಸಾಧಿಸಿದೇವು ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News