ನವದೆಹಲಿ: ವಿಶ್ವಸಂಸ್ಥೆ ಸಾಮಾನ್ಯ ಸಭೆ 74 ನೇ ಅಧಿವೇಶನದಲ್ಲಿ ಸೆಪ್ಟೆಂಬರ್ 27 ರಂದು ಭಾಷಣ ಮಾಡಲಿರುವ ಇಮ್ರಾನ್ ಖಾನ್ ಅದಕ್ಕೂ ಮುನ್ನ ಸೋಮವಾರದಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲಿದ್ದಾರೆ.
ಇಮ್ರಾನ್ ಖಾನ್ ಮತ್ತು ಟ್ರಂಪ್ ಸಭೆ ಇಂದು ಪಾಕಿಸ್ತಾನದ ಕಾಲಾವಧಿಯಂತೆ ರಾತ್ರಿ 10 ಗಂಟೆಗೆ ನಡೆಯಲಿದೆ. ಹೂಸ್ಟನ್ ನಲ್ಲಿ ಹೌಡಿ ಮೋದಿ ಬೃಹತ್ ಸಮಾವೇಶದಲ್ಲಿ ಟ್ರಂಪ್ ಭಾರತೀಯ ಪ್ರಧಾನಿಗೆ ಸಾಥ್ ನೀಡಿ ಭಾಗವಹಿಸಿದ ಸಮಯದಲ್ಲಿ ಈ ಸಭೆ ನಡೆಯುತ್ತಿರುವುದರಿಂದ ಇದಕ್ಕೆ ಭಾರಿ ಮಹತ್ವ ಬಂದಿದೆ.
ಭಯೋತ್ಪಾದನೆ ವಿರುದ್ಧದ ನಿರಂತರ ಹೋರಾಟದ ಬಗ್ಗೆ ಭಾರತಕ್ಕೆ ಬೆಂಬಲ ನೀಡುವುದಾಗಿ ಟ್ರಂಪ್ ಭರವಸೆ ನೀಡಿದರಲ್ಲದೆ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸ್ಥಿತಿಯನ್ನು ಬದಲಿಸಿದ 370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವ ಭಾರತದ ನಿರ್ಧಾರದ ಬಗ್ಗೆ ಪ್ರಶ್ನಿಸಲಿಲ್ಲ. ಕಳೆದ ವಾರವಷ್ಟೇ ಟ್ರಂಪ್ ಭಾರತ-ಪಾಕಿಸ್ತಾನ ಉದ್ವಿಗ್ನತೆಯಲ್ಲಿ ಸಾಕಷ್ಟು ಪ್ರಗತಿ ಕಂಡಿದೆ ಎಂದು ಹೇಳಿದರು. ಈಗ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಟ್ರಂಪ್ ಅವರ ಉಪಸ್ಥಿತಿಯಿಂದಾಗಿ ಪಾಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಾದೇಶಿಕ ಭದ್ರತೆಗೆ ಸಂಬಂಧಿಸಿದ ವಿಷಯಗಳ ಜೊತೆಗೆ ಇಮ್ರಾನ್ ಖಾನ್ ಮತ್ತು ಟ್ರಂಪ್ ನಡುವಿನ ಮಾತುಕತೆಯ ಕಾರ್ಯಸೂಚಿಯನ್ನು ಕಾಶ್ಮೀರ ಮತ್ತು ಅಫ್ಘಾನಿಸ್ತಾನದ ಮೇಲೆ ಕೇಂದ್ರೀಕರಿಸಲಾಗುವುದು ಎನ್ನಲಾಗಿದೆ. ಇನ್ನೊಂದೆಡೆ ಕಾಶ್ಮೀರದ ವಿಚಾರವಾಗಿ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸುವುದಾಗಿ ಹೇಳಿರುವ ಇಮ್ರಾನ್ ಖಾನ್ ಈಗ ತಮ್ಮ ಭಾಷಣಕ್ಕಾಗಿ ಎದುರು ನೋಡುತ್ತಿದ್ದಾರೆ. ಅವರು ಜಮ್ಮು ಕಾಶ್ಮೀರದಲ್ಲಿನ ಕರ್ಪ್ಯೂ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಕುರಿತಾಗಿ ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದೆ.