ನವದೆಹಲಿ: ಯುಕೆಯಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಪದವಿ ಬಳಿಕ ಎರಡು ವರ್ಷಗಳ ಕಾಲ ಅಲ್ಲೇ ಕೆಲಸ ಮಾಡಲು ಶೀಘ್ರದಲ್ಲೇ ಅವಕಾಶ ದೊರೆಯಲಿದೆ.
ಯುಕೆಯಲ್ಲಿ ಪದವಿ ಅಧ್ಯಯನದ ಬಳಿಕ ಉದ್ಯೋಗಕ್ಕಾಗಿ ಎರಡು ವರ್ಷಗಳ ಉದ್ಯೋಗ ವೀಸಾ ನೀಡುವ ಬಗ್ಗೆ ಬ್ರಿಟಿಶ್ ಸರ್ಕಾರ ಘೋಷಣೆ ಮಾಡಿದ್ದು, ಇದು ಭಾರತೀಯ ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲಾ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಈ ಅವಕಾಶ ದೊರೆಯಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ಬ್ರಿಟಿಷ್ ಹೈಕಮಿಷನರ್ ಸರ್ ಡೊಮಿನಿಕ್ ಅಸ್ಕ್ವಿತ್, "ಇದು ಭಾರತೀಯ ವಿದ್ಯಾರ್ಥಿಗಳಿಗೆ ನಿಜಕ್ಕೂ ಸಂತಸದ ಸುದ್ದಿಯಾಗಿದೆ. ಈ ಅವಕಾಶದಿಂದ ವಿದ್ಯಾರ್ಥಿಗಳು ಪದವಿ ಮುಗಿದ ಬಳಿಕ ಯುಕೆ ನಲ್ಲಿ ಹೆಚ್ಚಿನ ಸಮಯವನ್ನು ಕಳೆಯಲು, ಹೆಚ್ಚಿನ ಕೌಶಲ್ಯ ಮತ್ತು ಅನುಭವವನ್ನು ಪಡೆಯಲು ಅನುಕೂಲವಾಗಲಿದೆ" ಎಂದು ಹೇಳಿದ್ದಾರೆ.
ಜೂನ್ 2019ರ ವೇಳೆಗೆ ಸುಮಾರು 22,000 ಭಾರತೀಯ ವಿದ್ಯಾರ್ಥಿಗಳು ಯುಕೆಯಲ್ಲಿ ಅಧ್ಯಯನ ಮಾಡುತ್ತಿದ್ದು, ಯುಕೆ ಸರ್ಕಾರದ ಪ್ರಕಾರ ಇದು ವರ್ಷಕ್ಕೆ ಶೇ.42ರಷ್ಟು ಹೆಚ್ಚಳವಾಗಿದೆ.